Passion of the 'Self': Me @ Blogspot

Mahesha Elliadka blogs here...

Friday, March 13, 2009

ಕಾಲು ಶತಮಾನ - ಜವಾಬ್ದಾರಿ ಜೀವನಕ್ಕೆ ಸಿಂಹಾವಲೋಕನ


ಅಂತೂ
ಇಪ್ಪತ್ತೈದು ಸಲ ಮಾರ್ಚ್ ೧೩ ಬಂತು- ನಾನು ಹುಟ್ಟಿದ ಮೇಲೆ. ಒಂದು ಸಿಂಹಾವಲೋಕನ ಮಾಡುವುದಾದರೆ; ಪರಿಸರದಲ್ಲಿ ಅನೇಕ ಬದಲಾವಣೆಗಳಾಗಿವೆ. ಒಟ್ಟಾರೆ ಊರಿಗೆ ಊರೇ ಬದಲಾಗಿದೆ.

ಹಿರಿಯರಾದ ಅಜ್ಜ ಎಂದೋ ನಮ್ಮನ್ನು ಬಿಟ್ಟು ಹೋಗಿ ಆಗಿದೆ. ಕಪ್ಪು ಇದ್ದ ಅಪ್ಪನ ತಲೆಗೂದಲುಗಳು ಬಿಳಿಯಾಗುತ್ತಾ ಬಂದಿದೆ. ಅಮ್ಮನಿಗೆ ಕನ್ನಡಕ ಬಂದಿದೆ. ನಾನು ಆಗಾಗ ಜಗಳ ತೆಗೆಯುತ್ತಿದ್ದ ನನ್ನ ಅಣ್ಣ ಈಗ ದೂರದ ಅಮೆರಿಕದಲ್ಲಿ ಇಂಜಿನಿಯರು, ಜಗಳದ ಮಾತು ಬಿಡಿ, ಫೋನಿನಲ್ಲಿ ಹಲೋ ಹೇಳುವಷ್ಟೂ. ನನ್ನ ಪುಸ್ತಕದಲ್ಲೆಲ್ಲಾ ಗೀಚಿ ಗೀಚಿ ನನಗೆ ಬೈಗುಳ ತಿನಿಸುತ್ತಿದ್ದ ತಂಗಿ ಮುದ್ದಾಗಿ ಪುಟಗಟ್ಟಲೆ ಇಂಜಿನಿಯರಿಂಗ್ ನೋಟ್ಸ್ ಬರೀತಾಳೆ. ನಾನು ಜಡೆ ಎಳೆಯುತ್ತಿದ್ದ ಅತ್ತಿಗೆಗೆ ಜಡೆಯುದ್ದದ ಮಗಳಿದ್ದಾಳೆ. ನನ್ನಿಂದ ೧೭ ದಿನಗಳ ಅನಂತರ ಭೂಮಿಗೆ ಬಂದಿರುವ ನಮ್ಮ ಹಟ್ಟಿಯ ಮಾತೆ - ಉಮಾ, ಇಂದು ಪಿಜ್ಜಿಯ ಅಜ್ಜಿಯಾಗಿ ತುಂಬು ಸಂಸಾರಿಯಾಗಿದ್ದಾಳೆ. ರಾಕೆಟ್ ನ ನಂತರ ಟಾಮಿ,೧-೨-೩ ಬಂದು ಈಗ ನಾಲ್ಕನೇ ಟಾಮಿಯದ್ದು ಮನೆಯ ಉಸ್ತುವಾರಿ. ಅದೆಷ್ಟೋ ಬಿಲ್ಲಿಗಳು ಹಾಲು ಕುಡಿದಿವೆ.

ನಾನು ಹುಟ್ಟಿದ ಸಮಯದಲ್ಲಿ ಸತ್ತ ಇಂದಿರಾ ಗಾಂಧಿಯ ಪುಳ್ಳಿಯ ಮಗಳಿಗೆ ವೋಟು ಹಾಕುವ ಪ್ರಾಯ ಬಂದಿದೆ. ಸೋನಿಯಾ ಇಟಲಿ ಮನೆಯನ್ನು ಲೀಸಿಗೆ ಕೊಟ್ಟು ಡೆಲ್ಲಿಗೆ ಬಂದಾಗಿದೆ. ವಾಜಪೇಯಿ ಅಜ್ಜ ಪೊಕ್ರಾನ್ ನಲ್ಲಿ ಅಣು ಬಾಂಬು ಟೆಸ್ಟ್ ಮಾಡಿ ಆಸ್ಪತ್ರೆಗೆ ಹೋಗಿ ಆಗಿದೆ. ಅಮೇರಿಕ ನಿರ್ಬಂಧ ಹಾಕಿ, ತೆಗದೂ ಆಗಿದೆ. ಕ್ಲಿಂಟನ್, ಬುಷ್, ಎಲಿಜಬೆತ್ತು ಏನೇನೋ ಹೆಸರು ಕೇಳಿ ಮರೆತೂ ಆಗಿಯದೆ.

ಮೂಗಿನಿಂದ ಬಾಯಿಗೆ ಸಿಂಬಳದ ನಿರಂತರ ಸಂಪರ್ಕ ಇಟ್ಟಿದ್ದ ಹರೀಶೆ ಈಗ ಪುತ್ತೂರಿನಲ್ಲಿ ದೊಡ್ಡ ಆಣಿ. ಮುಖಕ್ಕೆ ಒಂದೊಂದಾಗಿ ಮುದ್ದಿಸುತ್ತಿದ್ದ ಮುದ್ದು ಹುಡುಗಿಯರು ಮುಖ ಸಿಂಡರಿಸಿ ಮಾರುದೂರ ಓಡುತ್ತಿದ್ದಾರೆ. ತರಗತಿ ಮಿತ್ರರು, ಕಾಲೇಜು ಹಿತೈಷಿಗಳು, ಗುರುಗಳು, ಆಚಾರ್ಯರು, ಮಾಷ್ಟ್ರು ಗಳು, ಟೀಚರು, ಲೆಕ್ಚರು, ಬಂಧುಗಳು, ನೋಟರಿಷ್ಟರು - ಅದೆಷ್ಟು ಮುಖಗಳೋ, ಅದರಲ್ಲೆಷ್ಟು ನನಗೆಷ್ಟು ನೆನಪಿದೆಯೋ! ಅವರಿಗೆಷ್ಟು ನೆನಪಿದೆಯೋ?

ಎಣ್ಣೆ ದೀಪದ ಬೆಳಕಿನಲ್ಲಿ ಮನೆಯ ಮುಳಿಯ ಮಾಡು ಕಾಣುವ ಆ ದಿನಗಳು, ರಜೆಯ ಕೆಲವು ದಿನ ಅಜ್ಜನ ಮನೆಯಲ್ಲಿ ಕಳೆಯುವ ಆ ಆಟದ ದಿನಗಳು, ಹೊಸ ಮನೆಯ ಒಕ್ಕಲಿನ ದಿನಗಳು, ಅಪ್ಪನ ಕೈ ಭದ್ರವಾಗಿ ಹಿಡಿದುಕೊಂಡು, ಜೋತಾಡುತ್ತಾ, ನೇತಾಡುತ್ತಾ ೧ ಮೈಲು ನಡೆದು ಮತ್ತೆ ಬಸ್ಸಿನಲ್ಲಿ ಅಪ್ಪನೇ ಮುಖ್ಯೋಪಾಧ್ಯಾಯರಾಗಿರುವ ಶಾಲೆಗೆ ಹೋಗುವ ಆ ದಿನಗಳು, ಅಣ್ಣ - ತಂಗಿಯ ಜೊತೆ ಜಗಲಾಡಿದ ದಿನಗಳು, ದೊಡ್ಡ ಶಾಲೆಗೆ ಸೇರಿದ ದೊಡ್ಡ ದಿನಗಳು, ಕಾಲೇಜಿಗೆ ಹೋದ ಹಸಿರಿನ ೪ ವರೆ ವರುಷದ ದಿನಗಳು, ಎಲ್ಲ ಅಧ್ಯಾಪಕರ ಸೇಡಿಗೆ ಸಿಕ್ಕಿ ನಲುಗಿ ಬೇಸತ್ತ ಉಳಿದ ಅರ್ಧ ವರ್ಷದ ದಿನಗಳು, ಯಶಸ್ವಿಯಾಗಿ ನಡೆಸಿದ ಸ್ನಾತಕೋತ್ತರ ದಿನಗಳು, ಬೆಂಗಳೂರಿಗೆ ಬಂದು ಪ್ರಾಜೆಕ್ಟ್ ಮಾಡಿದ ದಿನಗಳು, ಜಯನಗರ ದ ಚಿಕ್ಕ ಕೊನೆಯಲ್ಲಿ ಅಣ್ಣನೊಂದಿಗೆ ಹರಟುತ್ತಾ , ಕೋರ್ಸ್ ಮಾಡಿದ ದಿನಗಳು ಮತ್ತು ಕೆಲಸ ಸಿಕ್ಕಿದ ಮೇಲಿನ ಯಾಂತ್ರಿಕ ದಿನಗಳವರೆಗೆ ಎಲ್ಲ ಒಂದೊಂದಾಗಿ ಕಣ್ಣೆದುರು ಕಟ್ಟಿ ನಿಲ್ಲುತ್ತವೆ. ಜೀವಮಾನದ ಅತ್ಯಂತ ಹಸುರಾದ - ನೆಮ್ಮದಿಯ, ಕಾಲು ಭಾಗ ಈಗಾಗಲೇ ಸಮಾಪ್ತಿ. ಇನ್ನು ಏನಿದ್ದರೂ ಜವಾಬ್ದಾರಿ, ಜಂಜಡ , ಬದುಕು ಇತ್ಯಾದಿ ಬೆವರಿಳಿಸುವ ಕೆಲಸಗಳೇ.

ಬಾಲ, ಯವ್ವನ, ಗೃಹಸ್ಥ, ವಾನಪ್ರಸ್ಥ ದಲ್ಲಿ ನಾನೀಗ ಮುಗಿಸಿದ್ದು ಮೊದಲ ಒಂದೂವರೆ ಮಾತ್ರ. ಹಿಂದಿರುಗಿ ನೋಡಿದಾಗ ಮಾಡಿದ್ದು ಕೆಲವಾರು, ಮಾಡಬೇಕಾದ್ದು ಹಲವಾರು. ಮುಂದಿನ ಮೂರು ಭಾಗದ ಹಾದಿಗೆ ಸ್ಪಷ್ಟ ದಿಕ್ಕು, ನಿರ್ಧಾರ ತೆಗೆದುಕೊಳ್ಳುವ ಹಂತ ಇದೀಗ ಬಂದಿದೆ. ಶತಮಾನದ ಜೀವನಕ್ಕೆ ಬೇಕಾದ ಧೃಡ ಅಡಿಪಾಯ ಈಗ ಸಂಪೂರ್ಣ.


ಜೀವನ ಪರ್ಯಂತ ಆಗಾಗ ಜೀವನದ ಸಿಂಹಾವಲೋಕನ ಮಾಡಿಕೊಳ್ಳುವುದು ಅವಶ್ಯಕ. ತಪ್ಪುಗಳನ್ನು ತಿದ್ದಲು, ಸರಿಗಳನ್ನು ನೆನೆಯಲು ಅವಲೋಕನ ಬೇಕೇ ಬೇಕು. ಅದೇ ಈಗಿನ ಅಗತ್ಯತೆ.

Labels: , , , , ,

0 Comments:

Post a Comment

Subscribe to Post Comments [Atom]

<< Home